ಜ್ವಾಲಾಮುಖಿಜ ಶಿಲೆ -
ಜ್ವಾಲಾಮುಖಿಯ ಮೂಲಕ ಹೊರಕ್ಕೆ ಹರಿದ ಶಿಲಾಪಾಕ ಭೂಮಿಯ ಮೇಲ್ಮೈಯ ಮೇಲೆ ತಣ್ಪುಗೊಂಡು ಘನಸ್ಥಿತಿಯನ್ನು ಪಡೆದಾಗ ದೊರೆಯುವ ಶಿಲೆ (ವೋಲ್ಕ್ಯಾನಿಕ್ ರಾಕ್). ಇದು ಅಗ್ನಿಶಿಲೆಯ ಒಂದು ಬಗೆ. ಜನನ ಮತ್ತು ಅಸ್ತಿತ್ವಗಳನ್ನು ಆಧರಿಸಿ ಜ್ವಾಲಾಮುಖಿಜ ಶಿಲೆಗಳನ್ನು ಈ ಕೆಳಗಿನ ಎರಡು ಬಗೆಗಳಾಗಿ ವಿಂಗಡಿಸಿದೆ.

	1. ಶಿಲಾರಸ ಪ್ರವಾಹಗಳು : ಶಿಲಾಪಾಕ ಒಂದೇ ಜ್ವಲಾಮುಖಿಯ ಶಂಕುವಿನಿಂದಾಗಲಿ ಸೀಳುಗಳಿಂದಾಗಲಿ ಹೊರಕ್ಕೆ ಹರಿದು ಬರಬಹುದು. ಇದಕ್ಕೆ ಶಿಲಾರಸ ಪ್ರವಾಹ (ಲಾವಾ ಪ್ಲೋ) ಎಂದು ಹೆಸರು. ಶಿಲಾಪಾಕ ಭೂಮಿಯೊಳಗಡೆ ಇದ್ದಾಗ ಅದರೊಡನೆ ಮಿಶ್ರವಾಗಿದ್ದ ಅನಿಲ ವಸ್ತುಗಳು, ಒತ್ತಡ ಒಮ್ಮಿಂದೊಮ್ಮೆಲೇ ಕಡಿಮೆಯಾದ್ದರಿಂದ, ಬೇಗನೆ ವಾತಾವರಣವನ್ನು ಸೇರುತ್ತವೆ. ಅನಿಲಗಳು ಈ ರೀತಿ ಹೊರಹೊಮ್ಮುವಾಗ ಶಿಲಾರಸ ಪ್ರವಾಹದ ಸ್ನಿಗ್ಧತೆ ಹೆಚ್ಚಾಗುತ್ತದೆ ಮತ್ತು ಪ್ರವಾಹದ ಮೇಲ್ಮೈಯ ಮೇಲೆ ಗುಳ್ಳೆಗಳು, ಕುಳಿಗಳು, ಅಥವಾ ಬೊಬ್ಬೆಗಳು ಉಂಟಾಗುತ್ತವೆ. ಈ ವಿಶಿಷ್ಟ ಬಗೆಯ ಗುಳ್ಳೆಗಳಿಗೆ ಸಾಮಾನ್ಯವಾಗಿ ವರ್ತುಳ, ಸ್ತಂಭ ಅಥವಾ ಅಂಡಾಕೃತಿ ಇರುವುವು. ಇಂಥ ರಚನೆಗಳಿಗೆ ಗುಳ್ಳೆಗಳ ರಚನೆ (ವಾಸಿಕ್ಯುಲಾರ್ ಸ್ಟ್ರಕ್ಚರ್) ಎಂದು ಹೆಸರು. ಈ ಕುಳಿಗಳಲ್ಲಿ ಕಾಲಾಂತರದಲ್ಲಿ ದ್ವಿತೀಯಕ ಖನಿಜಗಳು (ಸೆಕೆಂಡರಿ ಮಿನರಲ್ಸ್) ತುಂಬಿಕೊಂಡರೆ ಅವಕ್ಕೆ ಅಮಿಗ್‍ಡೇಲ್‍ಗಳೆಂದೂ ಅಂಥ ರಚನೆಗೆ ಅಮಿಗ್‍ಡಲೈಡಲ್ ರಚನೆಯೆಂದೂ ಹೆಸರು. ಜ್ವಾಲಾಮುಖಿಯಿಂದ ಹೊರಬರುವ ಶಿಲಾರಸದ ಉಷ್ಣತೆ ಸಾಮಾನ್ಯವಾಗಿ 900( ಅ.- 1200( ಅ.ಯಷ್ಟು  ಇರುತ್ತದೆ. ಇಂಥ ಶಿಲಾರಸ ಒಮ್ಮಿಂದೊಮ್ಮೆಲೇ ನೈಸರ್ಗಿಕ ವಾತಾವರಣದ ಉಷ್ಣತೆ ಮತ್ತು ಒತ್ತಡಗಳಿಗೆ ಒಳಪಟ್ಟಾಗ ಅದರ ಉಷ್ಣತೆ ತ್ವರಿತವಾಗಿ ಇಳಿಯುತ್ತದೆ ; ಮತ್ತು ಉಷ್ಣತೆ ಸುಮಾರು 700( ಅ.ಯಷ್ಟು ತಲುಪಿದಾಗ ಗಟ್ಟಿಗೊಳ್ಳುತ್ತದೆ. ಇದಲ್ಲದೆ ಅನಿಲ ವಸ್ತುಗಳು ಹೊರಹೊಮ್ಮುವುದರಿಂದಲೂ ಸ್ನಿಗ್ಥತೆ ಹೆಚ್ಚಾಗುತ್ತದೆ. ಈ ಕಾರಣಗಳಿಂದಾಗಿ ಶಿಲಾರಸ ಸ್ಥೂಲವಾಗಿ ಹರಳುತಟ್ಟದೆ (ಕ್ರಿಸ್ಟಲೈಸ್) ಅತಿ ಸೂಕ್ಮವಾಗಿ ಹರಳುಗಟ್ಟುತ್ತದೆ. ತಣ್ಣುಗೊಳ್ಳುವ ಈ ಕ್ರಿಯೆ ಅತಿ ತೀವ್ರವಾಗಿ ನಡೆದರೆ ಶಿಲಾರಸ ಮುದ್ದೆಯಾಗುತ್ತದೆ (ಗ್ಲಾಸ್). ಶಿಲಾರಸದ ರಾಸಾಯನಿಕ ಸಂಯೋಜನೆ ಹೆಚ್ಚು ಕ್ಷಾರಿಯವಾಗಿದ್ದಷ್ಟು ಅದು ಹೆಚ್ಚು ಚಂಚಲವಾಗಿದ್ದು (ಮೊಬೈಲ್) ಹೆಚ್ಚು ದೂರದವರೆಗೆ ಪ್ರವಹಿಸುತ್ತದೆ. ಬಸಾಲ್ಟ್ ಶಿಲಾರಸ ರೈಯೋಲೈಟ್ ಶಿಲಾರಸಕ್ಕಿಂತಲೂ ಹೆಚ್ಚು ವೇಗದಿಂದ ಹೆಚ್ಚು ದೂರದವರೆಗೆ ಹರಿಯಬಲ್ಲದು. ಶಿಲಾರಸ ಪ್ರವಾಹದ ಸಂಯೋಜನೆ ಸಮಾನವಾಗಿದ್ದು, ಸಮಾನವಾಗಿ ತಣ್ಪುಗೊಂಡರೆ ಒಂದು ವಿಶಿಷ್ಟ ವಿನ್ಯಾಸದ ಸ್ತಂಭಾಕೃತಿಯ ಸಂದುಗಳು (ಕಾಲಮ್ನಾರ್ ಜಾಯಿಂಟ್ಸ್) ಉದ್ಭವಿಸುತ್ತವೆ. ಎಂಈ ಸ್ತಂಭಾಕೃತಿಯ ಸಂದುಗಳು ಬಸಾಲ್ಟನಲ್ಲಿ ಎದ್ದುಕಾಣುತ್ತದೆ. ಬಸಾಲ್ಟ ಶಿಲೆಯ ಶಿಥಿಲೀಕರಣವೂ (ವೆವರಿಂಗ್) ಒಂದು ವಿಶೇಷ ಬಗೆಯದು. ಅದು ಗೋಳಾಕಾರವಾಗಿ ಶಿಥಿಲಗೊಳ್ಳುತ್ತದೆ. ಆದ್ದರಿಂದ ಇದಕ್ಕೆ ಗೋಳಾಕಾರದ ಶಿಥಿಲೀಕರಣವೆಂದು ಹೆಸರು.

	ಶಿಲಾರಸಗಳಲ್ಲಿ ಪ್ರಮುಖವಾಗಿ ಎರಡು ವರ್ಗಗಳು. ಹೆಚ್ಚು ಸ್ನಗ್ಥವಾಗಿರುವ ಹಾಗೂ ತ್ವರಿತವಾಗಿ ತಣಿಯುವ ಶಿಲಾರಸ ಪ್ರವಾಹದ ಗಟ್ಟಿಗೊಂಡ ಕೆನೆ (ಕ್ರಸ್ಟ್) ಅನಿಲಗಳ ಬಲವಾದ ಸ್ಫೋಟನೆಯೊಂದಿಗೆ ಒಡೆದು ತುಂಡುಗಳಾಗುತ್ತದೆ. ಇವು ಒರಟಾಗಿಯೂ ಮೊನಚಾಗಿಯೂ ಇರುವುವು. ಇಂಥ ಶಿಲಾರಸಕ್ಕೆ ಚಪ್ಪಡಿ ಶಿಲಾರಸ (ಬ್ಲಾಕ್ ಲಾವಾ) ಎಂದು ಹೆಸರು. ಹೀಗಿಲ್ಲದೆ ಹೆಚ್ಚು ಚಂಚಲವಾಗಿರವ ಮತ್ತು ನಿಧಾನವಾಗಿ ತಣಿಯುವ ಶಿಲಾರಸಕ್ಕೆ ನುಣುಪಾದ ಮೇಲ್ಮೈ ಇರುವುದು. ಅದಕ್ಕೆ ಹಗ್ಗದ ಆಕಾರದ ಮಡಿಕೆಗಳು ಇರುವುದರಿಂದ ರಜ್ಜು (ರೋಪಿ) ಶಿಲಾರಸವೆಂದು ಹೆಸರು. ಇಂಥ ಶಿಲಾರಸ ಸಾಗರದ ತಶದ ಮೇಲೆ; ಅಂದರೆ ಅತಿ ಶೀತಲವಾದ ನೀರಿನ ಹೊದಿಕೆಯಡಿಯಲ್ಲಿ ಹರಿದರೆ ದಿಂಬಿನಾಕಾರದ (ಪಿಲ್ಲೊ ಲಾವಾ) ಪಡೆಯುತ್ತದೆ. ಪ್ರತಿಯೊಂದು ಶಿಲಾರಸದ ನಾಲಗೆ ಇನ್ನೊಂದರೊಡನೆ ಸೇರಿ ಪ್ರವಾಹದ ರೂಪವನ್ನು ಪಡೆಯುವುದಕ್ಕೆ ಮೊದಲೇ ತಣಿಯುವುದರಿಂದ ಈ ವಿಶಿಷ್ಟ ದಿಂಬಿನಾಕಾರವನ್ನು ಪಡೆಯುತ್ತದೆ. ಇಂಥ ದಿಂಬಿನಾಕಾರದ ಶಿಲಾರಸಗಳು ಚಿತ್ರದುರ್ಗ ಜಿಲ್ಲೆಯ ಮರಡಿಹಳ್ಳಿ, ಕಲ್ಲೇನಹಳ್ಳಿ, ಜೋಗಿಮರಡಿ, ಕೋಲಾರದ ಚಿನ್ನದ ಗಣಿಪ್ರದೇಶದ ಮಾರಿಕುಪ್ಪಮ್ ರೈಲ್ವೆ ನಿಲ್ದಾಣದ ಬಳಿ ಮತ್ತು ತುಮಕೂರು ಜಿಲ್ಲೆಯ ಬೆಳ್ಳಾರ ಎಂಬ ಸ್ಥಳಗಳಲ್ಲಿ ನೋಡಲು ಸಿಗುತ್ತವೆ.

2. ಅಗ್ನಿಛಿದ್ರ ಶಿಲೆಗಳು : ಜ್ವಾಲಾಮುಖಿಯ ಸ್ಫೋಟಿನ ಕ್ರಿಯೆಯಿಂದ ಉಂಟಾದವು. ಇವುಗಳ ಮೂಲವಸ್ತುಗಳನ್ನು ಆಧರಿಸಿ ಇವನ್ನು ಮೂರು ಗುಂಪುಗಳಲ್ಲಿ ವಿಂಗಡಿಸಬಹುದು.

	(i) ಪೂರ್ಣ ಅಥವಾ ಅರೆ ದ್ರವರೂಪದಲ್ಲಿರುವ ಶಿಲಾರಸ, ಪಿಚಕಾರಿಯಂತೆ ಹೊರಕ್ಕೆ ಚಿಮ್ಮಿ ಪ್ಯುಮೈಸ್, ಸ್ಕೋರಿಯೆ ಮತ್ತು ಜ್ವಲಾಮುಖಿಜ ಬಾಂಬ ಎಂಬ ವಿವಿಧ ಹೆಸರುಳುಳ್ಳ ಶಿಲೆಗಳಾಗಬಹುದು.

(ii) ಜ್ವಾಲಾಮುಖಿಯ ಕೊಳವೆಯ ಭಾಗ ಅಥವಾ ಜ್ವಲಾಮುಖಿಯ ಬಾಯಿಗೆ ಅಡ್ಡವಾಗಿ ಗಟ್ಟಿಗೊಂಡಿರುವ ಶಿಲಾರಸ ಸ್ಫೋಟಗೊಂಡು ಮೇಲಕ್ಕೆ ಬಂದು ಬಾಯಿಯ (ಕ್ರೇಟರ್) ಸುತ್ತಮುತ್ತಲೂ ಶೇಖರಗೊಂಡು ಜ್ವಾಲಾಮುಖಿಜ ಪೆಂಟೆಕಲ್ಲು (ಅಗ್ಲೋಮೆರೇಟ್) ಆಗುತ್ತದೆ. ಜ್ವಾಲಾಮುಖಿಯ ಬಾಯಿಯಿಂದ ಹೊರಬರುವ ಅತ್ಯಂತ ಸೂಕ್ಷ್ಮ ಕಣಗಳ ಬೂದಿ ಗಗನದಲ್ಲಿ ಹಾರಿ ನೇರ ಕೆಳಗಿಳಿಯಬಹುದು. ಅಥವಾ ಬಲುದೂರಕ್ಕೆ ಹಾರಿ ಹೋಗಬಹುದು. ಹೀಗೆ ನೆಲಕ್ಕಿಳಿದು ಗಟ್ಟಿಗೊಂಡ ಬೂದಿಗೆ ಜ್ವಾಲಾಮುಖಿಜ ಟುಫ್ ಎಂದು ಹೆಸರು.

(iii) ಜ್ವಾಲಾಮುಖಿ ರಭಸದಿಂದ ಆಸ್ಫೋಟಗೊಂಡಾಗ ಅದರ ಆಸ್ತಿಭಾರದಿಂದ ಶಿಲಾಖಂಡಗಳು ಸಿಡಿದು ಹೊರಚಿಮ್ಮುತ್ತವೆ. ಇವೇ ವಿಸರ್ಜಿತ ಖಂಡಗಳು (ಎಜೆಕ್ಟಡ್ ಬ್ಲಾಕ್ಸ್).

ಅಗ್ನಿಛಿದ್ರ ಶಿಲೆಗಳನ್ನು ಗಾತ್ರಕ್ಕೆ ಅನುಸರಿಸಿ ವರ್ಗೀಕರಿಸಬಹುದು.

ವಿಸ್ತೀರ್ಣ ಮತ್ತು ಗಾತ್ರ : ಶಿಲಾರಸಗಳು ಭೂಮಿಯ ಮೇಲೆ ಬಹಳ ವಿಸ್ತಾರವಾಗಿ ಹಬ್ಬಿವೆ. ಎರಡು ಲಕ್ಷ ಚ. ಮೈ. ಗಿಂತಲೂ ಹೆಚ್ಚು ವಿಸ್ತಾರವಾಗಿರುವ ಪ್ರಸ್ಥಭೂಮಿಯ ಬೆಸಾಲ್ಟುಗಳು ಭಾರತದ ದಕ್ಷಿಣದ ಭಾಗ, ಅಮೆರಿಕದ ಕೊಲಂಬಿಯ ಮತ್ತು ಸ್ನೇಕ್ ರಿವರ್ ವಲಯ, ದಕ್ಷಿಣ ಅಮೆರಿಕದ ವಾರಾನಾ ಪ್ರದೇಶಗಳಲ್ಲಿವೆ. ಭಾರತದ ದಕ್ಷಿಣದ ಟ್ರ್ಯಾಪ್ (ಡೆಕ್ಕನ್ ಟ್ರ್ಯಾಪ್) ಎಂದು ಕರೆಯಲ್ಪಡುವ ಬಸಾಲ್ಟ್ ಶಿಲಾರಸದ ವಿಸ್ತೀರ್ಣ ಎರಡು ಲಕ್ಷ ಚ. ಮೈ. ಅದು 700 ಅಡಿಗಳಷ್ಟು ಮಂದವಾಯೂ ಇದೆ ಎಂದು ಅಂದಾಜು. ಕರ್ನಾಟಕದ ಕಲ್ಬುರ್ಗಿ, ಬೀದರ್, ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಈ ಶಿಲಾರಸ ಸಿಗುತ್ತದೆ.
(ಎಸ್.ಸಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ